Wednesday, June 24, 2020

ಬಿಪಿಎಲ್‌ಗೆ ಉಚಿತ l ಎಪಿಎಲ್‌ನ ಶೇ 30ರಷ್ಟು ವೆಚ್ಚ ಭರಿಸಲಿರುವ ಸರ್ಕಾರ

ಕೋವಿಡ್-19: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ನಿಗದಿ
ಕರ್ನಾಟಕದಲ್ಲಿ ಕೋವಿಡ್‌–19 ಪ್ರಕರಣಗಳು ಏರಿಕೆ ಆಗುತ್ತಿರುವ ಬೆನ್ನಲ್ಲೇ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಸೌಲಭ್ಯವಾರು ದರ ನಿಗದಿ ಮಾಡಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಕಾರ್ಯ ನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯ ಸಮಿತಿಯು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪ್ಯಾಕೇಜ್‌ ಬಗ್ಗೆ ಸಚಿವರ ಕಾರ್ಯಪಡೆಗೆ ವರದಿ ಸಲ್ಲಿಸಿತ್ತು. ಅದಕ್ಕೆ ಕಾರ್ಯಪಡೆ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು‌ ಆದೇಶ ಹೊರಡಿಸಿದ್ದಾರೆ.

ರಾಜ್ಯದ 483 ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಹಾಸಿಗೆಗಳನ್ನು ಸರ್ಕಾರ ಶಿಫಾರಸು ಮಾಡಿ ಕಳುಹಿಸುವ ರೋಗಿಗಳಿಗೆ ಮೀಸಲಿಡಬೇಕು.ಬಿಪಿಎಲ್‌, ಎಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಆಯುಷ್ಮಾನ್ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಚಿಕಿತ್ಸೆ ನೀಡಲಾಗುವುದು.

ಅಂದರೆ, ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಸಂಪೂರ್ಣ ಉಚಿತ ಮತ್ತು ಎಪಿಎಲ್‌ ಕಾರ್ಡ್‌ ಹೊಂದಿರುವವರ ಚಿಕಿತ್ಸಾ ವೆಚ್ಚದಲ್ಲಿ ಶೇ 30 ರಷ್ಟು ಮೊತ್ತವನ್ನು ಸರ್ಕಾರವೇ ಭರಿಸಲಿದೆ. ಉಳಿದ ಮೊತ್ತವನ್ನು ರೋಗಿಯೇ ಭರಿಸಬೇಕು. ಆದರೆ, ಎರಡೂ ವರ್ಗಗಳ ಚಿಕಿತ್ಸಾ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಪಾವತಿಸುವುದರಿಂದ ಚಿಕಿತ್ಸಾ ದರ ಪಟ್ಟಿಯನ್ನು ನಿಗದಿ ಮಾಡಲಾಗಿದೆ.

ನಿಯಮ ಉಲ್ಲಂಘಿಸಿದರೆ ಶಿಕ್ಷೆ

ಖಾಸಗಿ ಆಸ್ಪತ್ರೆಗಳು ಷರತ್ತುಗಳನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಆದೇಶ ಎಚ್ಚರಿಸಿದೆ.

ಸರಾಸರಿ ₹1.7 ಲಕ್ಷ

ಒಬ್ಬ ರೋಗಿ ಸಾಮಾನ್ಯ ವಾರ್ಡ್‌ನಲ್ಲಿ 17 ದಿನಗಳು ಚಿಕಿತ್ಸೆ ಪಡೆದರೆ ಸುಮಾರು ₹1.7 ಲಕ್ಷ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ (ದಿನಕ್ಕೆ) ‌

ಚಿಕಿತ್ಸಾ ಸೌಲಭ್ಯ; ಆಯುಷ್ಮಾನ್ ಫಲಾನುಭವಿ; ಫಲಾನುಭವಿ ಅಲ್ಲದ ರೋಗಿ

ಸಾಮಾನ್ಯ ವಾರ್ಡ್ ; ₹ 5,200; ₹ 10,000

ಎಚ್‌ಡಿಯು(ಹೈ ಡಿಪೆಂಡೆನ್ಸಿ ಯುನಿಟ್);₹7,000;₹12,000

ಐಸೋಲೇಷನ್‌ ಐಸಿಯು ವೆಂಟಿಲೇಟರ್‌ ರಹಿತ;₹8,500;₹15,000

ಐಸೋಲೇಷನ್‌ ಐಸಿಯು ವೆಂಟಿಲೇಟರ್‌ ಸಹಿತ;₹10,000;₹25,000

(ಔಷಧ,ಪಿಪಿಇ  ಮತ್ತು ಸಾಮಾನ್ಯ ಪರಿಕರಗಳ ವೆಚ್ಚ ಇದರಲ್ಲಿ ಸೇರಿದೆ.  ಅಧಿಕ ಬೆಲೆಯ ಔಷಧಗಳು ಮತ್ತು ಪ್ಲಾಸ್ಮಾ ಥೆರಪಿ ಅನ್ವಯ ಆಗುವುದಿಲ್ಲ. ಇದನ್ನು ರೋಗಿಗಳೇ ಭರಿಸಬೇಕಾಗುತ್ತದೆ. ಫಲಾನುಭವಿ ಅಲ್ಲದವರು ಹಾಗೂ ನಗದು ಪಾವತಿಸುವವರಿಗೆ ಅನ್ವಯ.)

ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು: 483

ಸರ್ಕಾರ ವಿಧಿಸಿರುವ ಷರತ್ತುಗಳು

* ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಶಿಫಾರಸು ಮಾಡಿ ಕಳುಹಿಸುವ ಕೋವಿಡ್‌–19 ರೋಗಿಗಳಿಗೆ ಶೇ 50 ರಷ್ಟು ಹಾಸಿಗೆಗಳನ್ನು ಚಿಕಿತ್ಸೆಗಾಗಿ ಮೀಸಲಿಡಬೇಕು. ಇದು ಎಚ್‌ಡಿಯು ಮತ್ತು ಐಸಿಯು ಬೆಡ್‌ಗಳು(ವೆಂಟಿಲೇಟರ್‌ ಸಹಿತ ಮತ್ತು ವೆಂಟಿಲೇಟರ್‌ ರಹಿತ) ಒಳಗೊಂಡಿರುತ್ತವೆ. ಉಳಿದ ಶೇ 50 ರಷ್ಟು ಹಾಸಿಗೆಗಳನ್ನು ತಾವಾಗಿಯೇ ಬರುವ ಕೋವಿಡ್‌ ರೋಗಿಗಳಿಗೆ ಬಳಸಿಕೊಳ್ಳಬಹುದು.

*ಯಾವುದೇ ರೀತಿಯ ಆರೋಗ್ಯ ವಿಮೆ ಅಡಿ ಚಿಕಿತ್ಸೆ ಪಡೆಯುವವರಿಗೆ ಸರ್ಕಾರದ ದರ ಪಟ್ಟಿ ಅನ್ವಯಿಸುವುದಿಲ್ಲ.

* ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸಾಮಾನ್ಯ ವಾರ್ಡ್‌, ಶೇರಿಂಗ್‌ ವಾರ್ಡ್‌ ಮತ್ತು ಖಾಸಗಿ ವಾರ್ಡ್‌ಗಳ ಬೆಡ್‌ಗಳ ಒಟ್ಟು ಸಂಖ್ಯೆಯಲ್ಲಿ ಶೇ 50 ಎಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.

*ಖಾಸಗಿಯಾಗಿ ಬರುವ ರೋಗಿಗಳಿಗೆ ಚಿಕಿತ್ಸಾ ದರದ ಮಿತಿ (ಸೀಲಿಂಗ್‌) ಸಾಮಾನ್ಯ ವಾರ್ಡ್‌/ ಮಲ್ಟಿ ಶೇರಿಂಗ್‌ ವಾರ್ಡ್‌ಗಳಿಗೆ ಅನ್ವಯವಾಗುತ್ತದೆ. ಇಬ್ಬರು ರೋಗಿಗಳು ವಾರ್ಡ್‌ ಹಂಚಿಕೊಂಡರೆ ಶೇ 10 ರಷ್ಟು ಹೆಚ್ಚುವರಿಯಾಗಿ, ಸಿಂಗಲ್‌ ರೂಂಗೆ ಶೇ 25 ರಷ್ಟು ಹೆಚ್ಚು ವಿಧಿಸಬಹುದು. ಸೂಟ್‌ಗಳಿಗೆ ದರ ಮಿತಿ ವಿಧಿಸಿಲ್ಲ.

* ಬೆಂಗಳೂರಿನಲ್ಲಿ ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಉಳಿದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ರೋಗಿಗಳಿಗೆ ಶಿಫಾರಸು ಮಾಡುತ್ತಾರೆ.

* ರೋಗಿಗಳಲ್ಲಿ ಸಂಕೀರ್ಣತೆ, ಶಸ್ತ್ರ ಚಿಕಿತ್ಸೆ ಅಗತ್ಯತೆ ಇದ್ದರೆ ಮತ್ತು ಗರ್ಭಿಣಿಯರು ಇದ್ದರೆ ಅದಕ್ಕೆ ಪ್ರತ್ಯೇಕ ದರದ ಪ್ಯಾಕೇಜ್.

*ಕೋವಿಡ್‌ ಸಾಂಕ್ರಾಮಿಕ ರೋಗ ಆಗಿರುವುದರಿಂದ ಎಲ್ಲ ರೋಗಿಗಳು ಬಿಪಿಎಲ್‌, ಎಪಿಎಲ್‌, ವಲಸೆ ಕಾರ್ಮಿಕರು, ಇತರ ರಾಜ್ಯಗಳಿಂದ ವಾಪಸ್‌ ಬಂದವರಲ್ಲಿ ಪಡಿತರ ಚೀಟಿ ಇಲ್ಲದಿದ್ದರೂ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಬೇಕು. 

* ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಎಲ್ಲ ಕ್ಲೈಮ್‌ಗಳನ್ನು‌ ಪಾವತಿಸುವ ನೋಡಲ್‌ ಏಜೆನ್ಸಿ.

***

ಸೋಂಕಿತ ನಾಗರಿಕರು, ಸರ್ಕಾರಿ ಸಿಬ್ಬಂದಿ ಯಾವುದೇ ಕಾರಣಕ್ಕೂ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ 

- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

***

ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿದ್ದಲ್ಲಿ ತಜ್ಞರ ಜೊತೆ ಚರ್ಚಿಸಿ, ಮತ್ತೆ ಲಾಕ್‌ಡೌನ್ ಜಾರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ.

- ಬಿ.ಶ್ರೀರಾಮುಲು, ಆರೋಗ್ಯ ಸಚಿವ

No comments:

Post a Comment