Sunday, May 10, 2020

*ಅ. ನ. ಕೃ*


“ಕನ್ನಡವನ್ನು ಒಂದು cause ಎಂದು
ಕಟ್ಟಿಕೊಂಡು ಬದುಕಿದವರುಂಟು;
ಕಾಸಿಗೋಸ್ಕರವಾಗಿ ಕನ್ನಡವನ್ನು
ಕಟ್ಟಿಕೊಂಡು ಬದುಕಿದವರುಂಟು.

ಕೃಷ್ಣರಾಯರು ಮೊದಲಿನ ವರ್ಗಕ್ಕೆ ಸೇರಿದವರು” ಎಂದು ಡಾ. ಜಿ. ಪಿ. ರಾಜರತ್ನಂ, ಅ. ನ. ಕೃ ನೆನಪಿಗಾಗಿ ಪ್ರಕಟಿಸಿದ ‘ಸ್ನೇಹದ ದೀಪ’ದ ಮೊದಲ ಸಾಲುಗಳಲ್ಲಿ ಹೇಳುತಾರೆ.  ‘ಅ. ನ. ಕೃ’ ನಿಜದ ನೇರಕ್ಕೆ ನಡೆದು ಬದುಕನ್ನು ತೇದವರು.  ಗಂಡುಗುಣ ಅವರ ಪ್ರಧಾನ ಲಕ್ಷಣ.  ಸದಾ ಹಿರಿಯರಲ್ಲಿ ಪ್ರೀತಿ, ವಿಶ್ವಾಸ ತೋರುತ್ತಾ, ಕಿರಿಯರಲ್ಲಿ ವಾತ್ಸಲಮಯಿಯಾಗಿ ಬಾಳಿದವರು.

ಅರಕಲಗೂಡು ನರಸಿಂಗರಾಯ ಕೃಷ್ಣರಾಯ, ಅ. ನ. ಕೃ ಎಂದು ಸಂಕ್ಷಿಪ್ತನಾಮದಿಂದ ಕನ್ನಡನಾಡಿನಲ್ಲಿ ಜನಪ್ರಿಯರಾಗಿ, ಸುಮಾರು ನಾಲ್ಕು ದಶಕಗಳ ಕಾಲ ಕನ್ನಡವನ್ನು, ಕರ್ನಾಟಕವನ್ನು ಕಟ್ಟಲು ಶ್ರಮಿಸಿದರು.  250 ಕೃತಿಗಳನ್ನು ರಚಿಸಿದರು.  ಅವರ ವೈವಿಧ್ಯಮಯ ಬರವಣಿಗೆಗಳ ನಡುವೆ ಅವರನ್ನು ಮುಖ್ಯವಾಗಿ ಗುರುತಿಸುವುದು ಕಾದಂಬರಿಕಾರರಾಗಿ.  ಪ್ರಚಂಡ ಉತ್ಸಾಹ ಮತ್ತು ಚೈತನ್ಯಗಳಿಂದ ಅವರು ಎಷ್ಟು ಜನಪ್ರಿಯರಾಗಿದ್ದರೋ ಅಷ್ಟೇ ಬಿನ್ನಾಭಿಪ್ರಾಯಗಳ ಕೇಂದ್ರವಾಗಿದ್ದರು.  ಅವರ ಇಡೀ ಬದುಕನ್ನು ಪರಿಶೀಲಿಸಿದಾಗ ಮುಖ್ಯವಾಗಿ ಕಂಡು ಬರುವ ಮನೋಧರ್ಮ ‘ಕರ್ನಾಟಕತ್ವ’.  ಅ.ನ.ಕೃ ಅವರ ಬದುಕನ್ನು ಮರೆತು ಕೇವಲ ಅವರ ಸಾಹಿತ್ಯ ನಿರ್ಮಿತಿಯನ್ನು ಮಾತ್ರ ಗಮನಿಸುವುದರಿಂದ ಅವರ ಧೀಮಂತ ವ್ಯಕ್ತಿತ್ವ ಪೂರ್ಣವಾಗುವುದಿಲ್ಲ.  

ಹಾಸನ ಜೆಲ್ಲೆಯ ಅರಕಲುಗೂಡಿಲ್ಲಿ ಮೇ 9, 1908ರಂದು ಅ.ನ.ಕೃ, ನರಸಿಂಗರಾಯರು ಮತ್ತು ಅನ್ನಪೂರ್ಣಮ್ಮ ದಂಪತಿಗಳ ಮಗನಾಗಿ ಜನಿಸಿದರು.  ಇವರ ಬಾಲ್ಯ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದು ಬೆಂಗಳೂರಿನ ದೇಶೀಯ ವಿದ್ಯಾಶಾಲೆ.  ಕೆ. ಸಂಪದ್ಗಿರಿರಾಯರು, ಕಂದಾಡೆ ಕೃಷ್ಣಯ್ಯಂಗಾರ್ ಅವರ ಪಾಠ ಪ್ರವಚನಗಳಿಂದ ಗಟ್ಟಿಗೊಂಡು, ತಾರುಣ್ಯದಲ್ಲೇ ಗಾಂಧೀಜಿ, ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಪಂಡಿತ ತಾರಾನಾಥ, ಕೈಲಾಸಂ ಪ್ರಭಾವಕ್ಕೆ ಒಳಗಾಗಿ ತಮ್ಮ ಮುಂದಿನ ಬದುಕನ್ನು ರೂಪಿಸಿಕೊಂಡರು.

ಶಾಲಾ ಜೀವನದಲ್ಲಿ ಬಿ. ವೆಂಕಟಾಚಾರ್ಯ ಹಾಗೂ ಗಳಗನಾಥರ ಅನುವಾದಿತ ಕಾದಂಬರಿಗಳ ಓದು ಮತ್ತು ಎಂ. ಎಸ್. ಪುಟ್ಟಣ್ಣನವರ ಕೃತಿಗಳ ಅಧ್ಯಯನ ಮುಂದೆ ಕಾದಂಬರಿಯನ್ನೇ ತಮ್ಮ ಸೃಜನಶೀಲ ಮಾಧ್ಯಮವಾಗಿ ಆರಿಸಿಕೊಳ್ಳಲು ಪ್ರೇರಣೆ ಒದಗಿಸಿತು.  ತಮ್ಮ ಹದಿನಾರನೆಯ ವಯಸ್ಸಿನಲ್ಲೇ ತಂದೆಯ ಸ್ನೇಹಿತರಾದ ಅಭಿಜಾತ ನಟ ಎ. ಪಿ. ವರದಾಚಾರ್ ಒಡ್ಡಿದ ಸವಾಲಿಗೆ ಉತ್ತರವಾಗಿ, ಒಂದೇ ರಾತ್ರಿಯಲ್ಲಿ ‘ಮದುವೆಯೋ ಮನೆಹಾಳೋ’ (1924) ನಾಟಕವನ್ನು ಬರೆದರು.  1928ರಲ್ಲಿ ‘ಶಾಂತಿನಿಕೇತನ’ದ ವಿದ್ಯಾಭ್ಯಾಸ ಪದ್ದತಿಗೆ ಆಕರ್ಷಿತರಾಗಿ ರವೀಂದ್ರನಾಥ ಠಾಗೂರ್ ಮತ್ತು ನಂದಲಾಲ್ ಬೋಸ್ ಮುಂತಾದ ಕಲಾವಿದರೊಂದಿಗೆ ಕೆಲವು ತಿಂಗಳುಗಳ ಕಾಲ ಇದ್ದು, ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡ ನಾಡಿಗೆ ಹಿಂದಿರುಗಿದರು.  ಸಣ್ಣ ಕಥೆಗಳಿಗೇ ಮೀಸಲಾದ ‘ಕಥಾಂಜಲಿ’ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು.  ಆನಂದ, ರಾಶಿ, ರಾಜರತ್ನಂ, ಕೆ. ಗೋಪಾಲಕೃಷ್ಣರಾಯ ಮುಂತಾದ ಪ್ರತಿಭಾನ್ವಿತ ಲೇಖಕರನ್ನು ಬೆಳಕಿಗೆ ತಂದರು.  ಅಂದಿನ ‘ವಿಶ್ವಕರ್ನಾಟಕ’ ದಲ್ಲಿ ಕರ್ನಾಟಕದ ಬಗೆಗೆ ಹಲವಾರು ಲೇಖನಗಳನ್ನು ಪ್ರಕಟಿಸಿದರು.  1930ರಲ್ಲಿ ಧಾರವಾಡದಲ್ಲಿ  ನಡೆದ ಮೊದಲ ನಾಟಕ ಸಮ್ಮೇಳನಕ್ಕೆ ಅತಿಥಿಯಾಗಿ ಹೋದರು.  ಅನಂತರ ತಮ್ಮ ಕನಸಿನ ಅಖಂಡ ಕರ್ನಾಟಕದ ಸಂಘಟನೆಗಾಗಿ  ಹಲವಾರು ಬಾರಿ ಕನ್ನಡನಾಡನ್ನು ಸುತ್ತಾಡಿದರು.  ಅ.ನ.ಕೃ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಉತ್ತಮ ವಾಗ್ಮಿಗಳಾಗಿ ಪಂಡಿತ ಪಾಮರರನ್ನು ತಲೆದೂಗುವಂತೆ ಮಾಡುತ್ತಿದ್ದ ವಿಷಯ ಇಂದು ದಂತಕಥೆಯಾಗಿದೆ.  

ಅ. ನ. ಕೃ ಮೊದಲು ಕನ್ನಡದಲ್ಲಿ ಮೊದಲನೆಯ ಬಾರಿಗೆ ‘ಪ್ರಣಯ ಗೀತೆಗಳು’ (1930) ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದರು.  ಅವರ ಹೈದರಾಬಾದ್, ಮುಂಬಯಿಗಳ ಓಡಾಟ ಕಾಲದಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿಯನ್ನು ತಳೆದರು.  1932ರಲ್ಲಿ ಬರೆದ ‘ಭಾರತೀಯ ಚಿತ್ರಕಲೆಯಲಿ ರಾಜಾರವಿವರ್ಮನ ಸ್ಥಾನ’ ಕನ್ನಡದಲ್ಲಿ ಚಿತ್ರಕಲಾ ವಿಮರ್ಶೆ ಒಳಗೊಂಡ ಮೊದಲ ಪುಸ್ತಕ.  ಅವರು ಕರ್ನಾಟಕ, ಹಿಂದೂಸ್ಥಾನಿ, ಸಂಗೀತ ಸಂಪ್ರದಾಯಗಳ ಬಗ್ಗೆ ತೋರಿದ ಪ್ರೀತಿ, ಅದಕ್ಕಾಗಿ ಅವರು ಮಾಡಿದ ಪರಿಚಾರಿಕೆ ಅನೇಕ ಕಲಾವಿದರ ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಟ್ಟಿತು.  ಇವರಲ್ಲಿ ಪ್ರಮುಖರೆಂದರೆ ಖಾನ್ ಅಬ್ದುಲ್ ಕರೀಂಖಾನ್, ಸವಾಯ್ ಗಂಧರ್ವ, ಹಾಲೀಂ ಜಾಫರ್, ಬಿಡಾರಂ ಕೃಷ್ಣಪ್ಪ, ಟಿ. ಚೌಡಯ್ಯ, ದೇವೇಂದ್ರಪ್ಪ, ಚಿಕ್ಕರಾಮರಾಯ, ಮಲ್ಲಿಕಾರ್ಜುನ ಮನ್ಸೂರ್, ವೆಂಕಟಪ್ಪ, ಮಿಣಜಗಿ.  ಇವರಲ್ಲಿ ಅನೇಕರ ವ್ಯಕ್ತಿಚಿತ್ರಗಳನ್ನು ‘ಕರ್ನಾಟಕದ ಕಲಾವಿದರು’, ‘ಬರಹಗಾರನ ಬದುಕು’ ಪುಸ್ತಕಗಳಲ್ಲಿ ಕಣ್ಣಿಗೆ ಕಟ್ಟುವಂತೆ ಬಿಡಿಸಿದ್ದಾರೆ.  

1935ರಲ್ಲಿ ಪತ್ರಿಕೋದ್ಯಮ ಅ.ನ.ಕೃ ಅವರನ್ನು ಮುಂಬಯಿಗೆ ಸೆಳೆಯಿತು.  The Bombay Chronicle ಮತ್ತು The Illustrated Weekly of Inida ದಲ್ಲಿ ಅನೇಕ ಲೇಖನಗಳನ್ನು ಬರೆದರು. ಮತ್ತೆ ಅವರಿಗೆ ಕನ್ನಡ ನಾಡಿನಿಂದ ಕರೆಬಂತು.  1936-37ರಲ್ಲಿ ‘ವಿಶ್ವವಾಣಿ’ಯ ಸಂಪಾದಕರಾಗಿ, 1939ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ಯ ಮೊದಲ ಸಂಪಾದಕರಾದರು.  ಅಂದಿನ ಕರ್ನಾಟಕ ರಾಜಕೀಯ, ಆರ್ಥಿಕ ಸ್ಥಿತಿಗತಿಗಳು, ಕನ್ನಡ ಇವುಗಳನ್ನು ಕುರಿತು ಅನೇಕ ಲೇಖನಗಳನ್ನೂ ಹರಿತವಾಗಿ ಬರೆದರು.  1945ರಲ್ಲಿ ಮುಧೋಳದಲ್ಲಿ ನಡೆದ ಕರ್ನಾಟಕದ ಏಕೀಕರಣ ಸಭೆಯಲ್ಲಿ ಭಾಗವಹಿಸಿದ್ದರು.  ಕನ್ನಡ-ಹಿಂದಿ ವಾಗ್ವಾದದಲ್ಲಿ ಕನ್ನಡ ಪರವಾದ ದಿಟ್ಟ ನಿಲುವನ್ನು ತಳೆದು ‘ಕನ್ನಡನುಡಿ’ ಸಂಪಾದಕತ್ವವನ್ನು ಬಿಟ್ಟುಕೊಟ್ಟರು.  ಅವರು ಕನ್ನಡ ಕೆಲಸಕ್ಕಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಲು ಹಿಂಜರಿಯುತ್ತಿರಲಿಲ್ಲ.  

ನಲವತ್ತರ ದಶಕದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿ ಕನ್ನಡ ಸಾಹಿತ್ಯದ ಹೊಸ ತಿರುವಿಗೆ, ಲವಲವಿಕೆಗೆ, ವಾಗ್ವಾದಕ್ಕೆ ಕೇಂದ್ರಬಿಂದುವಾಯಿತು.  ತ.ರಾ.ಸು, ಶ್ರೀರಂಗ, ನಿರಂಜನ, ಬಸವರಾಜ ಕಟ್ಟೀಮನಿ, ಚದುರಂಗ, ಎಸ್. ಅನಂತನಾರಾಯಣ, ಮಾ.ನಾ. ಚೌಡಪ್ಪ, ಡಿ.ಕೆ. ಭಾರದ್ವಾಜ, ಕುಮಾರ ವೆಂಕಣ್ಣ, ನಾಡಿಗೇರ ಕೃಷ್ಣರಾಯ, ಅರ್ಚಕ ವೆಂಕಟೇಶ, ತಿಪ್ಪೇಶ್ವರ ದೊಡ್ಡಮನಿ ಮುಂತಾದವರು ಈ ಚಳವಳಿಯ ಮುಂಚೂಣಿಯಲ್ಲಿದ್ದರು.  1935ರಲ್ಲಿ ಇ. ಎಂ. ಫಾರ್ ಸ್ಟರ್ ಅಧ್ಯಕ್ಷತೆಯಲ್ಲಿ ಪ್ಯಾರಿಸ್ ನಲ್ಲಿ ಪ್ರಗತಿಶೀಲರ ಪ್ರಥಮ ಅಧಿವೇಶನ ನಡೆಯಿತು.  1936ರಲ್ಲಿ ಪ್ರೇಮಚಂದರ ಅಧ್ಯಕ್ಷತೆಯಲ್ಲಿ ಭಾರತೀಯ ಲೇಖಕರ ಪ್ರಥಮ ಪ್ರಗತಿಶೀಲ ಸಮ್ಮೇಳನ ಲಕ್ನೋದಲ್ಲಿ ಜರುಗಿತು.  1943ರ ನವೆಂಬರ್ ನಲ್ಲಿ ಕರ್ನಾಟಕ ಪ್ರಗತಿಶೀಲರ ಸಂಘ ಅ.ನ.ಕೃ ಮುಂದಾಳತ್ವದಲ್ಲಿ ಸ್ಥಾಪನೆಗೊಂಡಿತು.  1944ರಲ್ಲಿ ಈ ಸಂಘ ‘ಪ್ರಗತಿಶೀಲ ಸಾಹಿತ್ಯ’, ‘ಮ್ಯಾಕ್ಸಿಂ ಗಾರ್ಕಿ ಸಂಸ್ಕರಣ ಗ್ರಂಥ’, ‘ರಸ ಋಷಿ’ ಗ್ರಂಥಗಳನ್ನು ಪ್ರಕಟಿಸಿತು.  ಈ ಚಳವಳಿ ಅ.ನ.ಕೃ ಅವರನ್ನು ಮತ್ತಷ್ಟು ಜನಪ್ರಿಯಗೊಳಿಸಿತು.  

ಅ.ನ.ಕೃ ಅಭಿಮಾನಿ ಬಳಗ ಅವರ ಶ್ರೇಷ್ಠ ಕಾದಂಬರಿಯಾದ ‘ಸಂಧ್ಯಾರಾಗ’ ಕೃತಿಯನ್ನು ಕುರಿತು ರಸ ವಿಮರ್ಶೆಯ ‘ಸಂಧ್ಯಾರಾಗ ಪ್ರಶಸ್ತಿ’ಯನ್ನು ಅರ್ಪಿಸಿತು.  ಅ.ನ.ಕೃ ಮಣಿಪಾಲದಲ್ಲಿ ನಡೆದ 42ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.  1969ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿಯನ್ನು ನೀಡಿತು.  1970ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿತು.  ಅದೇ ವರ್ಷ ಅ.ನ.ಕೃ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡರು.  ಕೊನೆಯುಸಿರಿನವರೆಗೂ ನಾಡುನುಡಿಯ ಬಗ್ಗೆ ಮುಂಚೂಣಿಯ ಹೋರಾಟಗಾರರಾಗಿಯೇ ಇದ್ದರು.  ಅ.ನ.ಕೃ ಮತ್ತು ಎಂ. ರಾಮಮೂರ್ತಿ ಅಂದಿನ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಆರಂಭಿಸಿದ ಕನ್ನಡ ಚಳವಳಿ ಈಗ ಇತಿಹಾಸದ ಮಾತಾಗಿದೆ.  ಅ. ನ. ಕೃ 63ನೆಯ ವಯಸ್ಸಿನಲ್ಲಿ 8ನೇ ಜುಲೈ 1971ರಂದು ಬೆಂಗಳೂರಿನಲ್ಲಿ ನಿಧನರಾದರು.  ಸದಾ ಜನರ ಮಧ್ಯೆ ಇರುವುದು ಅವರಿಗೆ ಪ್ರಿಯವಾಗುತ್ತಿತ್ತು.  ಅವರು ಏಕಕಾಲದಲ್ಲಿ ಕರ್ನಾಟಕತ್ವವನ್ನು, ಭಾರತೀಯತೆಯನ್ನು ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ತುಂಬು ವ್ಯಕ್ತಿತ್ವವನ್ನು ರೂಪಿಸಿಕೊಂಡರು.  ಕನ್ನಡ ನಾಡು-ನುಡಿಗೆ ಹಿರಿಮೆ, ಘನತೆ ಹಾಗೂ ಗೌರವವನ್ನು ತಂದುಕೊಡುವುದು ಅವರಲ್ಲಿ ಸದಾ ಸ್ಥಾಯಿಯಾಗಿದ್ದ ಜೀವನ ದರ್ಶನ.  

ಅ.ನ.ಕೃ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ನವೀನ ಪ್ರಯೋಗಗಳನ್ನು ನಡೆಸಿದ್ದಾರೆ.  ಆದರೆ ಅವರಿಗೆ ಕೀರ್ತಿಯನ್ನು ತಂದುಕೊಟ್ಟದ್ದು ಕಾದಂಬರಿ ಮಾಧ್ಯಮ.  ಅವರು ಅವ್ಯಾಹತವಾಗಿ ಒಂದರ ಮೇಲೊಂದು ಕಾದಂಬರಿಗಳನ್ನು ಬರೆಯುತ್ತಾ ಹೋದರು.  ಕೃತಿಗಳ ಸಂಖ್ಯೆಯ ದೃಷ್ಟಿಯಿಂದ, ಪ್ರಯೋಗಗಳ ದೃಷ್ಟಿಯಿಂದ, ವಸ್ತು ವೈವಿಧ್ಯದಿಂದ, ಮಾಂತ್ರಿಕ ಶೈಲಿಯ ಮೋಡಿಯಿಂದ ಒಂದು ಪೀಳಿಗೆಯ ಬರಹಗಾರರ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದರು.  ನಾಲ್ಕು ಮತ್ತು ಐದನೆಯ ದಶಕದಲ್ಲಿ ಕಾದಂಬರಿಯನ್ನು ಪ್ರಮುಖ ಅಭಿವ್ಯಕ್ತಿಯ ಪ್ರಕಾರವನ್ನಾಗಿ ರೂಪಿಸಿದರು.  ಅವರ ‘ಮಿಂಚು’, ‘ಅದೃಷ್ಟ ನಕ್ಷತ್ರ; ಮುಂತಾದ ಕಥಾ ಸಂಕಲನಗಳಲ್ಲಿ ಹಾಗೂ ಕಾದಂಬರಿಗಳಲ್ಲಿ ಮುಖ್ಯವಾಗಿ ಮಾನವೀಯ ಧೋರಣೆಯನ್ನು ಸಾಮಾನ್ಯನಿಗೆ ಬದುಕಿನಲ್ಲಿ ಘನತೆಯನ್ನು ತಂದುಕೊಡುವ ಪ್ರಯತ್ನ ಮಾಡಿದರು.

‘ಉದಯರಾಗ’, ‘ಸಂಧ್ಯಾರಾಗ’, ‘ಸಾಹಿತ್ಯ ರತ್ನ’, ‘ಕನ್ನಡಮ್ಮನ ಗುಡಿಯಲ್ಲಿ’, ‘ದೀಪಾರಾಧನೆ’, ‘ನಟಸಾರ್ವಭೌಮ’, ‘ಚಿತ್ರವಿಚಿತ್ರ’, ‘ಬಣ್ಣದ ಬದುಕು’, ‘ಹೊನ್ನೆ ಮೊದಲು’ ಕೃತಿಗಳಲ್ಲಿ ಅ.ನ.ಕೃ ಕಲಾವಿದರ ಜೀವನದ ಸೋಲುಗೆಲುವುಗಳನ್ನು ತೆರೆದಿಟ್ಟಿದ್ದಾರೆ.  

ಅ. ನ. ಕೃ ಸುಮಾರು ಅರವತ್ತರ ದಶಕದಲ್ಲಿ ಬರೆದ ಕಾದಂಬರಿಗಳು ಬದಲಾಗುತ್ತಿರುವ ಸಮಾಜದ ಬಗ್ಗೆ ತೋರಿದ ಪ್ರತಿಕ್ರಿಯೆಗಳಾಗಿವೆ.  ‘ಗೃಹಲಕ್ಷ್ಮಿ’, ‘ರುಕ್ಮಿಣಿ’, ‘ತಾಯಿ-ಮಕ್ಕಳು’, ‘ಆಶೀರ್ವಾದ’, ‘ಅನುಗ್ರಹ’, ‘ಹೆಂಗರುಳು’, ಕಾದಂಬರಿಗಳಲ್ಲಿ ಈ ನೆಲದ ಸಂಸ್ಕೃತಿಯ ವ್ಯಾಖ್ಯಾನವನ್ನು ಮಾಡುವುದರೊಂದಿಗೆ ತಮ್ಮ ಸಾಂಪ್ರದಾಯಿಕ ಮನಸ್ಸಿನ ಮನೋಧರ್ಮವನ್ನು; ಪರಿವರ್ತನೆಯ ಸಮಾಜದಲ್ಲಿ ಹೆಣ್ಣು ಅನುಭವಿಸುವ ದುರಂತದ ಚಿತ್ರವನ್ನು ಕೊಟ್ಟಿದ್ದಾರೆ.

ಪಂಡಿತ ತಾರಾನಾಥ ಅ.ನ.ಕೃ ಅವರ ಪ್ರಥಮ ಕಾದಂಬರಿಗೆ ಕಥಾವಸ್ತುವನ್ನು ಸೂಚಿಸಿದರು.  ಆ ಕೃತಿಯೇ ‘ಜೀವನಯಾತ್ರೆ’.  ಈ ಕೃತಿಯಿಂದ ಸಮಾಜದಲ್ಲಿನ ಗಂಡು-ಹೆಣ್ಣಿನ ಸಂಬಂಧಗಳ ವಿಶ್ಲೇಷಣೆಗೆ ಪ್ರಾರಂಭವಾಗಿ ‘ಶ್ರೀಮತಿ’, ‘ಮುಡಿಮಲ್ಲಿಗೆ’, ‘ಧರ್ಮಪತ್ನಿ’, ‘ಕಾಂಚನಗಂಗಾ’, ‘ಕಾಗದದ ಹೂ’ ಕಾದಂಬರಿಗಳಲ್ಲಿ ಮುಂದುವರಿದು ಅವರನ್ನು ಅತ್ಯಂತ ವಿವಾದಕ್ಕೆ ಗುರಿಮಾಡಿದ ‘ನಗ್ನಸತ್ಯ’, ‘ಶನಿ ಸಂತಾನ’, ‘ಸಂಜೆಗತ್ತಲು’ ಕಾದಂಬರಿಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿವೆ.  ಅ.ನ. ಕೃ ವಿವಾದಗಳಿಂದ ತಮ್ಮನ್ನು ಸಮರ್ಥಿಸಿಕೊಳ್ಳಲು ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ ಎಂಬ ವಿಶಿಷ್ಟ ಕೃತಿಯನ್ನು ರಚಿಸಬೇಕಾಯಿತು.  ‘ಹೇಗಾದರೂ ಬದುಕು’, ‘ಮನೆಯಲ್ಲಿ ಮಹಾಯುದ್ಧ’, ‘ಪಶ್ಚಾತ್ತಾಪ’, ‘,ಪುನರವತಾರ’ ಕಾದಂಬರಿಗಳಲ್ಲಿ ರಾಜಕೀಯ, ಅಸ್ಪೃಶ್ಯತೆಗಳನ್ನು ಕುರಿತು ಬರೆದರು.  

ಅ.ನ.ಕೃ ಅವರು ‘ಯಲಹಂಕ ಭೂಪಾಲ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮತ್ತು ವಿಜಯನಗರ ಸಾಮ್ರಾಜ್ಯವನ್ನು ಕುರಿತ ಐತಿಹಾಸಿಕ ಕಾದಂಬರಿ ಮಾಲೆಯನ್ನು ರಚಿಸಿದರು.  ಈ ಕಾದಂಬರಿಗಳ ಮುಖ್ಯ ಗುಣವೆಂದರೆ ಕರ್ನಾಟಕ ಚರಿತ್ರೆಯನ್ನು ಜನಪ್ರಿಯಗೊಳಿಸುವುದು.

ಅ.ನ.ಕೃ ಅವರು ಹೆಚ್ಚು ಸಾರ್ವಜನಿಕ ವ್ಯಕ್ತಿ ಆಗಿದ್ದರಿಂದಲೋ ಏನೋ ಅವರ ಕೃತಿಗಳಲ್ಲಿ ಆಳವಾದ ಚಿಂತನೆ ಮೂಡಲು ಸಾಧ್ಯವಾಗಲಿಲ್ಲ ಎಂಬ ಅಭಿಪ್ರಾಯ ವಿದ್ವಾಂಸರದು.  ಆದರೆ ಅವರ ಬರಹಗಳು ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾದವು ಎಂಬುದು ಗಮನಾರ್ಹವಾದದ್ದು.  ಅವರು ಕಥಾ ಸಾಹಿತ್ಯದ ದಿಗಂತಗಳನ್ನು ವಿಸ್ತರಿಸಿದರು.  ಅವರ ಸಾಹಿತ್ಯ ಕೃತಿಗಳು ಅಂದಿನ ಸಮಾಜದ ಸಂಕ್ರಮಣ ಸ್ಥಿತಿಗಳನ್ನು ಅಧ್ಯಯನ ಮಾಡುವ ಸಮಾಜ ವಿಜ್ಞಾನಿಗೆ ಆಕರಗಳಂತಿವೆ. 

ಅ. ನ. ಕೃ ಸಾಹಿತ್ಯ ಜೀವನವನ್ನು ಆರಂಭಿಸಿದ್ದೇ ನಾಟಕದಿಂದ.  ಕೈಲಾಸಂ, ಶ್ರೀರಂಗರು ನಾಟಕಗಳನ್ನು ಬರೆಯಲು ಪ್ರಾರಂಭಿಸಿದ್ದ ಕಾಲದಲ್ಲೇ ಇವರು ನಾಟಕಗಳನ್ನು ಬರೆದರೂ ಕೊನೆಗೆ ಅವರ ಆಯ್ಕೆ ಕಾದಂಬರಿ.  ನಾಟಕಕಾರರಾಗಿ, ನಟರಾಗಿ ಅಂದಿನ ಗುಬ್ಬಿ ವೀರಣ್ಣ, ಮಹಮ್ಮದ್ ಪೀರ್, ಬಳ್ಳಾರಿ ರಾಘವ, ನಾಗೇಂದ್ರರಾವ್, ಹಂದಿಗನೂರು ಸಿದ್ಧರಾಯಪ್ಪ, ಸುಬ್ಬಯ್ಯ ನಾಯ್ಡು, ವರದಾಚಾರ್, ಹಿರಣ್ಣಯ್ಯ, ಕೃಷ್ಣಮೂರ್ತಿ, ಮಳವಳ್ಳಿ ಸುಂದರಮ್ಮ, ಜಯಮ್ಮ ಮುಂತಾದ ಅಸಂಖ್ಯಾತ ಗೆಳೆಯರ ಸ್ನೇಹವಲಯವನ್ನು ಕಟ್ಟಿಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಾಯಕರಾದರು.  ಅಂದಿನ ನಾಟಕದ ರೀತಿ-ನೀತಿಗಳ ಬಗ್ಗೆ, ಪ್ರಯೋಗಗಳ ಬಗ್ಗೆ ಅನೇಕ ಲೇಖನಗಳನ್ನು ‘ರಂಗಭೂಮಿ’ಯಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ.  ‘ಆದದ್ದೇನು’, ‘ಗುಬ್ಬಚ್ಚಿಗೂಡು’, ‘ಧರ್ಮಸಂಕಟ’, ‘ವಿಶ್ವಧರ್ಮ’, ‘ಬಣ್ಣದ ಬೀಸಣಿಗೆ’, ಮುಂತಾದ ನಾಟಕಗಳಲ್ಲಿ ಹಿಂದೂ-ಮುಸ್ಲಿಂ ಸಮಸ್ಯೆಯನ್ನು ಹಾಗೂ ಸ್ತ್ರೀಯರ ಬಗ್ಗೆ ಅವರಿಗಿರುವ ಕಳಕಳಿಯನ್ನು ಗುರುತಿಸಬಹುದು.  ಪೌರಾಣಿಕ ನಾಟಕಗಳಾದ ‘ಸ್ವರ್ಣಮೂರ್ತಿ’, ‘ಹಿರಣ್ಯಕಷಿಪು’ ಪಾತ್ರಚಿತ್ರಣಗಳಲ್ಲಿ ಹೊಸ ಬಗೆಯ ನಿಲುವನ್ನು ಕಾಣಬಹುದು.  ಇವು ಕನ್ನಡ ನಾಟಕದ  ಪ್ರಾರಂಭದ ಪ್ರಯೋಗಗಳೆಂದು ಮನ್ನಣೆ ಪಡೆದಿವೆ.  ಅ.ನ. ಕೃ ಚಲನಚಿತ್ರ ಜಗತ್ತಿನೊಂದಿಗೂ ನಿಕಟ ಸಂಬಂಧವನ್ನು ಇರಿಸಿಕೊಂಡಿದ್ದರು.  ‘ಜೀವನನಾಟಕ’, ‘ಸ್ತ್ರೀರತ್ನ’ ಚಿತ್ರಗಳಿಗೆ ಸಂಭಾಷಣೆಯನ್ನು ಬರೆದರು.  ಆ ಪ್ರಪಂಚ ಅವರನ್ನು ಹೆಚ್ಚು ಆಕರ್ಷಿಸಲಿಲ್ಲ.  ಆದರೆ ಅದರ ಅನುಭವವನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿಕೊಂಡರು.  ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು 1962ರಲ್ಲಿ ಅವರು ಹೂಡಿದ ಚಳವಳಿಯ ಫಲವನ್ನು ಇಂದೂ ಕನ್ನಡ ಚಿತ್ರರಂಗ ಅನುಭವಿಸುತ್ತಿದೆ.

ಅ.ನ.ಕೃ ಕೇವಲ ಕಥಾ ಸಾಹಿತ್ಯ ನಾಟಕಗಳಿಗೆ ಮಾತ್ರ ಸೀಮಿತವಾದ ಬರಹಗಾರರಾಗಿರಲಿಲ್ಲ.  ಅವರು ಜೀವನ ಚರಿತ್ರೆ, ವ್ಯಕ್ತಿಚಿತ್ರಗಳು, ವಿಮರ್ಶೆ, ಕಲಾವಿಮರ್ಶೆ, ಆತ್ಮಕಥನ ಮತ್ತು ಪ್ರಚಾರ ಸಾಹಿತ್ಯವನ್ನು ರಚಿಸಿದ್ದಾರೆ.  ಅ.ನ.ಕೃ ಅವರ ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಗಳು ಅವರ ವಿಶಾಲ ಮನೋಧರ್ಮವನ್ನು ರಸ ವಿಮರ್ಶೆಯ ದೃಷ್ಟಿಯನ್ನೂ ಸೂಚಿಸುತ್ತವೆ.  ಅವರ  ಕಲಾ ವಿಮರ್ಶೆ ಬಹುಕಾಲ ಉಳಿಯುವಂತಹುದಾಗಿದೆ.   ಅ.ನ.ಕೃ ಅವರ ‘ನನ್ನನ್ನು ನಾನೇ ಕಂಡೆ’, ಮತ್ತು ‘ಬರಹಗಾರನ ಬದುಕು’ ಅವರ ಸಾಹಿತ್ಯದ ಮನೋಧರ್ಮವನ್ನು ಒಳಗೊಂಡಿದ್ದು ಸಾಹಿತ್ಯಕ ನೆನಪುಗಳನ್ನು ದಾಖಲಿಸಿವೆ.  ಅವರು ಬಿಡಿಸಿದ ‘ಕರ್ನಾಟಕ ಕಲಾವಿದರು’, ‘ಕನ್ನಡ ಕುಲರಸಿಕರು’ ವ್ಯಕ್ತಿಚಿತ್ರಗಳು ಕನ್ನಡಕ್ಕೆ ಸಂದ ಅಪೂರ್ವ ಕೊಡುಗೆ. 

ಅ.ನ.ಕೃ ತಮ್ಮ ಬದುಕು-ಬರಹಗಳ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿದ್ದು ‘ಕರ್ನಾಟಕತ್ವ’ದ ದರ್ಶನ’; ‘ಕರ್ನಾಟಕ ಸಂಸ್ಕೃತಿಯ ಪುನರುತ್ಥಾನ’,  ಅಂದಿನ ಬದಲಾವಣೆಯ ಬಿರುಗಾಳಿಯಲ್ಲೂ ಕನ್ನಡತನ ಆರದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ; ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನದಲ್ಲಿ’ ತಮ್ಮ ಇಡೀ ಪ್ರತಿಭೆಯನ್ನೂ, ಸಾಮರ್ಥ್ಯ ಶಕ್ತಿಗಳನ್ನೂ ಧಾರೆ ಎರೆದರು.  ಕನ್ನಡ ನಾಡಿನ ಸರ್ವತೊಮುಖದ ಅಭಿವೃದ್ಧಿಯ ಬಗ್ಗೆ  ನಾಡಿನ ಉದ್ದಗಲ ಅನೇಕ ಬಾರಿ ಸುತ್ತಾಡಿ, ಭಾಷಣಗಳನ್ನು ಮಾಡಿ ಎಚ್ಚರಿಸಿದರು.  ಜನಸಾಮಾನ್ಯ ಓದುಗರಿಗೆ ಸಾಹಿತ್ಯ ರಚನೆ ಮಾಡಿದರು.  ಅಪಾರ ಜನಪ್ರಿಯತೆಯನ್ನು ಸಂಪಾದಿಸಿದರು.  ಅ.ನ.ಕೃ ಹೆಸರು ಕನ್ನಡಿಗರ ಆತಿಥ್ಯ, ಘನತೆ, ಗೌರವದ ಸಂಕೇತ, ಅ.ನ.ಕೃ. ನಾಡು ಮರೆಯಲಾಗದ ಸಾಂಸ್ಕೃತಿಕ ಸೇನಾನಿ. 

*ಚಿ. ಶ್ರೀನಿವಾಸರಾಜು ಅವರು ಅ.ನ.ಕೃ ಅವರನ್ನು ಕುರಿತು ಬರೆದಿರುವ ಲೇಖನದ ಆಧಾರಿತ*

*ಸಂಗ್ರಹ : ಅಕ್ಕಿ ಮುತ್ತುರಾಜ್*

No comments:

Post a Comment