Saturday, May 23, 2020

ಸ್ಟೈರೀನ್ ಗ್ಯಾಸ್

ಇಷ್ಟಕ್ಕೂ ಏನಿದು ಸ್ಟೈರೀನ್ ಗ್ಯಾಸ್? ಅದರಿಂದ ಏನು ಅಪಾಯ?



ಸ್ಟೈರೀನ್ (Styrene) ಪ್ಲಾಸ್ಟಿಕ್ ತಯಾರಿಕೆಗೆ ಉಪಯೋಗಿಸುವ ರಾಸಾಯನಿಕ ಸಂಯುಕ್ತವಾಗಿದೆ. ಬೆಂಜೀನ್ ರಾಸಾಯನಿಕದಿಂದ ಇದನ್ನು ಪಡೆಯಬಹುದು. ರಸಾಯನಶಾಸ್ತ್ರದಲ್ಲಿ ಇದಕ್ಕೆ ಇಥೆನೈಲ್​ ಬೆಂಜೀನ್, ವೀನೈಲ್ ​ಬೆಂಜೀನ್ ಮತ್ತು ಫೀನೈಲ್ ​ಈಥೀನ್ ಎನ್ನುತ್ತಾರೆ.  

ರಾಸಾಯನಿಕ ಸೂತ್ರ ::- C6H5CH=CH2

ಸ್ಟೈರೀನ್ ಅನ್ನು ಯಾವುದಕ್ಕೆ ಬಳಸುತ್ತಾರೆ?

ಸ್ಟೈರೀನ್ ಲ್ಯಾಟೆಕ್ಸ್, ಸಿಂಥೆಟಿಕ್ ರಬ್ಬರ್ ಮತ್ತು ಪಾಲಿಸ್ಟೈರೀನ್ ರಾಳಗಳನ್ನು ತಯಾರಿಸಲು ಬಳಸುವ ರಾಸಾಯನಿಕವಾಗಿದೆ. ಅಲ್ಲದೆ ಪಾಲಿಸ್ಟೈರೀನ್ ಪ್ಲಾಸ್ಟಿಕ್ ಮತ್ತು ಅಂಟುಗಳ ತಯಾರಿಕೆಗೆ ಈ ಸ್ಟೈರೀನ್ ರಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಜಿಡ್ಡಿನಂತಿರುವ ಈ ಅನಿಲಕ್ಕೆ  ಬಣ್ಣ ಇರುವುದಿಲ್ಲ. ಕೆಲವೊಮ್ಮೆ ಇದು ನಸು ಹಳದಿಯಂತೆ ತೋರಬಹುದು. ರಾಸಾಯನಿಕ ಪ್ರಮಾಣ ಹೆಚ್ಚಾಗಿದ್ದರೆ ವಾಸನೆ ಕಠಿಣವಾಗಿರುತ್ತದೆ. ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಹಾಗೇ ಈ ರಾಸಾಯನಿಕವು ಗಾಳಿಗೆ ಬಂದರೆ ಬಹಳ ಬೇಗ ಆವಿಯಾಗಿಹೋಗುತ್ತದೆ.

ಸ್ಟೈರೀನ್ ಅನಿಲ ಹೆಚ್ಚಾಗಿ ಸೇವಿಸಿದಾಗ ಏನಾಗುತ್ತದೆ?

ಸ್ಟೈರೀನ್ ಅನಿಲವನ್ನು ಉಸಿರಾಡಿದಾಗ ಕಣ್ಣು ಉರಿಯುತ್ತದೆ, ಗಂಟಲು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಉಸಿರಾಟಕ್ಕೆ ತೀವ್ರ ತೊಂದರೆಯಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಈ ಗ್ಯಾಸ್ ಅನ್ನು ಉಸಿರಾಡಿದಾಗ ದೇಹದ ಮುಖ್ಯ ನರ ವ್ಯವಸ್ಥೆಗೆ  ಘಾಸಿಯಾಗಬಹುದು. ಇದರಿಂದ ತಲೆನೋವು, ಸುಸ್ತು, ಅಶಕ್ತಿ, ಖಿನ್ನತೆ, ಕಿವುಡು ಇತ್ಯಾದಿ ಬಾಧಿಸಬಹುದು. ಕೆಲ ಅಧ್ಯಯನಗಳಲ್ಲಿ ಲ್ಯೂಕೆಮಿಯಾ, ಲಿಂಫೋಮಾ ಮೊದಲಾದ ತೊಂದರೆಗಳಿಗೆ ಈ ಅನಿಲ ಕಾರಣವಾಗಬಹುದು ಎಂದು ಎನ್ ಡಿಆರ್ ಎಫ್ ನಿರ್ದೇಶಕ ಎಸ್ ಎನ್ ಪ್ರಧಾನ್  ಹೇಳಿದ್ದಾರೆ. 

ನಮ್ಮ ಸಹಜ ವಾತಾವರಣದಲ್ಲಿ ಆಮ್ಲಜನಕದಂತೆ ಹಲವು ಅನಿಲಗಳು ಇದ್ದು, ಅದೇ ರೀತಿಯಲ್ಲೆ ಸ್ಟೈರೀನ್ ಕೂಡ ಇರುತ್ತದೆ. ಕಟ್ಟಡ ನಿರ್ಮಾಣ ವಸ್ತುಗಳು, ಬಳಕೆದಾರ ವಸ್ತುಗಳು, ತಂಬಾಕು ಹೊಗೆಯಿಂದ ಈ ಅನಿಲ ಬರಬಹುದು. ಪ್ಲಾಸ್ಟಿಕ್ ಕಾರ್ಖಾನೆಗಳಿಂದ ಇದು ಹೆಚ್ಚು ಹೊರಹೊಮ್ಮುವ ಸಾಧ್ಯತೆ ಇರುತ್ತದೆ. ಇನ್ನು ಕೆಲ ಅಧ್ಯಯನಗಳಲ್ಲಿ ಸ್ಟೈರೀನ್ ನಿಂದಾಗಿ ಕ್ಯಾನ್ಸರ್ ಬರುತ್ತದೆ ಎಂಬ ವಾದವಿದೆಯಾದರೂ ಅದಕ್ಕೆ ಪೂರಕ ಅಂಶಗಳು ಲಭ್ಯವಾಗಿಲ್ಲ. ಇನ್ನು ಈ ಸ್ಟೈರೀನ್ ರಾಸಾಯನಿಕವನ್ನು ನೇರವಾಗಿ ನಿರ್ವಹಣೆ ಮಾಡುವ ಕಾರ್ಮಿಕರಲ್ಲಿ ಕಣ್ಣಿನ ಕೆರೆತ,  ಉಸಿರಾಟದ ತೊಂದರೆ ಸಾಮಾನ್ಯವಾಗಿರುತ್ತದೆ. ದೀರ್ಘಕಾಲದಲ್ಲಿ ಇದು ಮಾನವನ ನರಮಂಡಲದ ಮೇಲೆಯೇ ಘಾಸಿ ಮಾಡುತ್ತದೆ.

ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಇದರ ಬಳಕೆ ಹೇಗೆ?

ಪ್ರಸ್ತುತ ವಿಷಾನಿಲ ಸೋರಿಕೆ ಮೂಲಕ ಸುದ್ದಿಗೆ ಗ್ರಾಸವಾಗಿರುವ ಎಲ್ ಜಿ ಪಾಲಿಮರ್ಸ್ ಕಾರ್ಖಾನೆ ಮಕ್ಕಳ ಪ್ಲಾಸ್ಟಿಕ್ ಆಟಿಕೆಗಳ ತಯಾರಿಕಾ ಸಂಸ್ಥೆಯಾಗಿದೆ. ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯನ್ನು 1961ರಲ್ಲಿ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ಇದಕ್ಕೆ ಹಿಂದೂಸ್ತಾನ್  ಪಾಲಿಮರ್ಸ್ ಎಂದು ಹೆಸರಿತ್ತು. ಬಳಿಕ 1978ರಲ್ಲಿ ಮೆಕ್ ಡೊವೆಲ್ ಮತ್ತು ಕಂಪನಿ ಲಿಮಿಟೆಡ್ ಆಫ್ ಯುಬಿ ಸಮೂಹದೊಂದಿಗೆ ವಿಲೀನಗೊಂಡಿತ್ತು. ಎಲ್ ಜಿ ಪಾಲಿಮರ್ಸ್ ಸಂಸ್ಥೆ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್, ಬಿಸಾಡಬಹುದಾದ ಕಪ್ ಗಳು ಮತ್ತು ಪಾತ್ರೆಗಳು ಇತರೆ  ವಸ್ತುಗಳ ತಯಾರಿಕೆ ಮಾಡುತ್ತದೆ. ಈ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಗಾಗಿಯೇ ಸ್ಟೈರೀನ್ ರಾಸಾಯನಿಕವನ್ನು ಬಳಸಲಾಗುತ್ತಿತ್ತು ಎಂದು ಸಂಸ್ಥೆ ಹೇಳಿಕೊಂಡಿದೆ. ಲಾಕ್ ಡೌನ್ ಬಳಿಕ ಕಾರ್ಖಾನೆ ಪುನಾರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಈ ರಾಸಾಯನಿರಕ ಅನಿಲ  ಸೋರಿಕೆಯಾಗಿದೆ.

No comments:

Post a Comment