Thursday, April 11, 2019

ನಿಝಾಮಾಬಾದ್ ಲೋಕಸಭಾ ಕ್ಷೇತ್ರ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಸಾಧ್ಯತೆ

ಹೈದರಾಬಾದ್, .11: ನಿಝಾಮಾಬಾದ್ ಲೋಕಸಭಾ ಕ್ಷೇತ್ರದ ಚುನಾವಣೆಯು ಗುರುವಾರ ತೆಲಂಗಾಣ ರಾಜ್ಯದ ಇತರ 16 ಕ್ಷೇತ್ರಗಳ ಜೊತೆ ನಡೆಯಲಿದೆ. ನಿಝಾಮಾಬಾದ್ ಕ್ಷೇತ್ರವೊಂದರಲ್ಲೇ ಗರಿಷ್ಠ ಪ್ರಮಾಣದ ಇಲೆಕ್ಟ್ರಾನಿಕ್ ವೋಟಿಂಗ್ ಮಿಶನ್(ಇವಿಎಂ)ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ನಿಝಾಮಾಬಾದ್ ಕ್ಷೇತ್ರದಲ್ಲಿ 178 ಮಂದಿ ರೈತರು ಸೇರಿದಂತೆ ಒಟ್ಟು 185 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಆಯೋಗ ಪ್ರತಿ ಬೂತ್ನಲ್ಲಿ 12 ಇವಿಎಂ ಬಳಕೆ ಮಾಡುತ್ತಿದೆ.

ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಬೆಳಗ್ಗೆ 7:00 ಗಂಟೆಗೆ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯ ಇವಿಎಂ ಅಳವಡಿಸಬೇಕಾಗಿರುವ ಹಿನ್ನೆಲೆಯಲ್ಲಿ ನಿಝಾಮಾಬಾದ್ನಲ್ಲಿ ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭವಾಗಿದೆ.
''ವಿಶ್ವದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಅಭ್ಯರ್ಥಿಗಳ ಮಧ್ಯೆ ಗರಿಷ್ಠ ಸಂಖ್ಯೆಯ ಇವಿಎಂ ಬಳಸಿಕೊಂಡು ಚುನಾವಣೆ ನಡೆಸಲಾಗುತ್ತಿದೆ'' ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್ ಹೇಳಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್)ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಇದೇ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸುತ್ತಿದ್ದಾರೆ. ಕವಿತಾ ತನ್ನ ಪತಿ ಅನಿಲ್ ಜೊತೆಗೆ ಗುರುವಾರ ಬೆಳಗ್ಗೆ ಬೊಧಾನ್ ಅಸೆಂಬ್ಲಿಯ ಪೊಟಂಗಲ್ ಗ್ರಾಮದಲ್ಲಿ ಮತ ಚಲಾಯಿಸಿದರು.


 

No comments:

Post a Comment