Sunday, July 1, 2018

ಇಳಿವಯಸ್ಸಿನಲ್ಲಿ ಉಪಯುಕ್ತ ಅಟಲ್ ಪಿಂಚಣಿ

Vijayavani 2 Jul.
| ಜೆ.ಸಿ. ಜಾಧವ

ದುಡಿಮೆಯ ದಿನಗಳಲ್ಲಿ ಸ್ವಲ್ಪ ಮೊತ್ತವನ್ನು ನಿವೃತ್ತಿಯ ಬದುಕಿಗಾಗಿ ಉಳಿತಾಯ ಮಾಡುವುದೇ ಪಿಂಚಣಿ ಯೋಜನೆ. ಇದರಿಂದ ಜೀವನಪರ್ಯಂತ ಆರ್ಥಿಕ ಸ್ವಾತಂತ್ರ್ಯ ಜತೆಗೆ ನೆಮ್ಮದಿ ಹಾಗೂ ಸ್ವಾಭಿಮಾನದ ಜೀವನ ಸಾಗಿಸಲು ಸಹಕಾರಿಯಾಗುತ್ತದೆ.

ಬಹಳಷ್ಟು ಜನರಿಗೆ ಈಗ ಸಂದೇಹ ಎದುರಾಗಿರಬಹುದು, ಏನೆಂದರೆ ಹೆಚ್ಚಿನ ಆದಾಯವಿರುವವರಿಗೆ ಮಾತ್ರ ಪಿಂಚಣಿಗಾಗಿ ಉಳಿತಾಯ ಮಾಡಲು ಸಾಧ್ಯ ಎಂದು. ಆದರೆ ಕಡಿಮೆ ಆದಾಯವಿರುವವರಿಗೆ, ಕಾರ್ವಿುಕರಿಗೆ ಹಾಗೂ ಎಲ್ಲ ವರ್ಗದ ಜನರಿಗೆ ಸಹಕಾರಿಯಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ‘ಅಟಲ್ ಪಿಂಚಣಿ ಯೋಜನೆ’ ಎಂಬ ಸಾಮಾಜಿಕ ಸುರಕ್ಷಾ ಯೋಜನೆಯನ್ನು 2015ರ ಜೂನ್​ನಲ್ಲಿ ಜಾರಿಗೊಳಿಸಿದೆ. ಈ ಮೊದಲು ಇದ್ದ ‘ಸ್ವಾವಲಂಬನ’ ಪಿಂಚಣಿ ಯೋಜನೆಯು ಬಹಳಷ್ಟು ಜನರಿಗೆ ತಲುಪದ ಕಾರಣ ಹಾಗೂ ಸರಳವಾಗಿ ಜನರಿಗೆ ತಿಳಿಯುವ ದೃಷ್ಟಿಯಿಂದ ಎಪಿವೈ ಯೋಜನೆ ಜಾರಿಗೊಳಿಸಲಾಗಿದೆ.

ಈ ಅಟಲ್ ಪಿಂಚಣಿ ಯೋಜನೆಯು ಕಾರ್ವಿುಕ ವಲಯದ ಅದರಲ್ಲೂ ಕಡಿಮೆ ಆದಾಯವಿರುವವರಿಗೆ, ಅತಿ ಕಡಿಮೆ ಮೊತ್ತ ಪಾವತಿಸಿ, ತಮ್ಮ ನಿವೃತ್ತಿಯ ವಯಸ್ಸಿಗೆ ಖಚಿತ ಹಾಗೂ ನಿರ್ದಿಷ್ಟಪಡಿಸಿದ ಮಾಸಿಕ ಪಿಂಚಣಿ ನೀಡುವ ಭರವಸೆಯಾಗಿದೆ.

ಖಾತೆ ತೆರೆಯಲು ಭಾರತೀಯ ನಾಗರಿಕರಾಗಿರಬೇಕು. ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. 18ರಿಂದ 40 ವರ್ಷದ ಒಳಗಿನವರಿಗೆ ಮಾತ್ರ ಖಾತೆ ತೆರೆಯಲು ಅವಕಾಶವಿದೆ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡುವುದು ಅವಶ್ಯ. ರಾಷ್ಟ್ರೀಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹಾಗೂ ಕೆಲವೊಂದು ಖಾಸಗಿ ಬ್ಯಾಂಕ್ ಇಲ್ಲವೆ ಕೋಆಪರೇಟಿವ್ ಬ್ಯಾಂಕ್​ನಲ್ಲಿ, ಈ ಯಾವುದಾದರೂ ಒಂದು ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ಸಾಕು. ಉಳಿತಾಯ ಖಾತೆ ಹೊಂದಿದ ಬ್ಯಾಂಕ್​ಗೆ ಹೋಗಿ ವಿಚಾರಿಸಿದರೆ, ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಹಾಗೆಯೇ ತಕ್ಷಣ ಎಪಿವೈ ಯೋಜನೆಯ ನೋಂದಾಯಿತ ಚಂದಾದಾರರಾಗಿ ಸೇರಿಕೊಳ್ಳಬಹುದು.

60ನೇ ವಯಸ್ಸಿಗೆ ಎಷ್ಟು ಪಿಂಚಣಿ ಬೇಕೆಂದು ಬಯಸುತ್ತೀರೋ, ಅದರ ಮೇಲೆ ಹೂಡುವ ಹಣ ಅವಲಂಬಿತವಾಗಿದೆ. ಅಂದರೆ ಮಾಸಿಕ ರೂ.1000/-, ರೂ.2000/-, ರೂ.3000/-, ರೂ.4000/- ಹಾಗೂ ರೂ.5000/-. ಹೀಗೆ ಖಚಿತ ಪಿಂಚಣಿ ಆಧಾರದ ಮೇಲೆ, ಮಾಸಿಕ, ತ್ರೖೆಮಾಸಿಕ ಹಾಗೂ ಅರ್ಧ ವಾರ್ಷಿಕವಾಗಿ ಇಚ್ಛಾನುಸಾರ ಈಗಿನಿಂದಲೇ ಪಾವತಿಸಬೇಕಾಗುತ್ತದೆ. ಪ್ರಾರಂಭದ 18 ವರ್ಷದ ವಯಸ್ಸಿನ ವ್ಯಕ್ತಿ 42 ವರ್ಷ ನಿರಂತರವಾಗಿ ಪಾವತಿಸಿದರೆ, 40 ವರ್ಷದ ವ್ಯಕ್ತಿ 20 ವರ್ಷಗಳವರೆಗೆ ನಿರಂತರವಾಗಿ ಪಾವತಿಸಿ, 60ನೇ ವರ್ಷದ ವಯಸ್ಸಿನಿಂದ ಖಚಿತ ಹಾಗೂ ನಿರಂತರ ಮಾಸಿಕ ಪಿಂಚಣಿಯು ಪ್ರಾರಂಭವಾಗುತ್ತದೆ. 18 ವರ್ಷದವರು ತಮ್ಮ 60ನೇ ವಯಸ್ಸಿಗೆ ರೂ.1000 ಪಿಂಚಣಿ ಬೇಕಾದಲ್ಲಿ ರೂ.42, ರೂ.2000 ಕ್ಕೆ ರೂ.84, ರೂ.3000ಕ್ಕೆ ರೂ.126, ರೂ.4000ಕ್ಕೆ ರೂ.168 ಹಾಗೂ ರೂ.5000ಕ್ಕೆ ರೂ.210 ಈಗಿನಿಂದಲೇ ಮಾಸಿಕವಾಗಿ ಹಾಗೂ ನಿರಂತರವಾಗಿ 42 ವರ್ಷಗಳ ಕಾಲ ಪಾವತಿಸಬೇಕಾಗುತ್ತದೆ. ಅದೇ ರೀತಿ, 30 ವರ್ಷದ ವ್ಯಕ್ತಿ ತಮ್ಮ 60ನೇ ವಯಸ್ಸಿಗೆ ರೂ.1000 ಪಿಂಚಣಿ ಬೇಕಾದಲ್ಲಿ ರೂ.116, ರೂ.2000ಕ್ಕೆ ರೂ.231, ರೂ.3000ಕ್ಕೆ ರೂ.347, ರೂ.4000ಕ್ಕೆ ರೂ.462 ಹಾಗೂ ರೂ.5000ಕ್ಕೆ ರೂ.577 ಈಗಿನಿಂದಲೇ ಮಾಸಿಕವಾಗಿ ಹಾಗೂ ನಿರಂತರವಾಗಿ ಪಾವತಿಸಬೇಕಾಗುತ್ತದೆ.

ಬದಲಾವಣೆಗೆ ಅವಕಾಶ:
ಈ ಯೋಜನೆಯ ಸದಸ್ಯರು ಹಣ ಪಾವತಿಸುವ ಅವಧಿಯಲ್ಲಿ ಹೆಚ್ಚು ಅಥವಾ ಕಡಿಮೆ ಹಣ ಪಾವತಿಸಲು ಅವಕಾಶವಿದೆ. ವರ್ಷದಲ್ಲಿ ಒಂದು ಸಲ, ಅಂದರೆ ಏಪ್ರಿಲ್ ತಿಂಗಳಲ್ಲಿ ಮಾತ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಉದಾಹರಣೆ: 25 ವರ್ಷದ ವ್ಯಕ್ತಿ ತನ್ನ 60ನೇ ವರ್ಷಕ್ಕೆ ರೂ.2000 ಪಿಂಚಣಿ ಬೇಕೆಂದು ಬಯಸಿ ರೂ.76 ಮಾಸಿಕವಾಗಿ ಪಾವತಿಸುತ್ತಿರುತ್ತಾನೆ.ಆತ ರೂ.5000 ಪಿಂಚಣಿ ಬೇಕೆಂದು ಬಯಸಿದರೆ ರೂ.376 ಪಾವತಿಸಲು ಅವಕಾಶವಿದೆ. ಹಾಗೆಯೇ ಆತನಿಗೆ ರೂ.1000 ಪಿಂಚಣಿ ಬೇಕೆನಿಸಿದರೆ ರೂ.35 ಮಾಸಿಕವಾಗಿ ಪಾವತಿಸಬೇಕಾಗುತ್ತದೆ. ಹೀಗೆ ಹಣ ಪಾವತಿಸುವ ಅವಧಿಯಲ್ಲಿ ತನ್ನಿಷ್ಟದಂತೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಈ ಯೋಜನೆಯಲ್ಲಿ ನೋಂದಾಯಿತ ಸದಸ್ಯರಾಗಿ ತಮಗೆ 60 ವರ್ಷಕ್ಕೆ ಎಷ್ಟು ಪಿಂಚಣಿ ಬೇಕೆಂದು ನಿರ್ಧರಿಸಿ, ಆ ಪ್ರಮಾಣದ ಮೊತ್ತವನ್ನು ನಿರಂತರವಾಗಿ ಪಾವತಿಸುವುದು ಕಡ್ಡಾಯ. ಅನನುಕೂಲದಿಂದ ಪಾವತಿಸಲು ಆಗದಿದ್ದರೆ ಕೆಲವೊಂದು ದಂಡಗಳನ್ನು ವಿಧಿಸಲಾಗುವುದು. ನಿರಂತರವಾಗಿ 6 ತಿಂಗಳವರೆಗೆ ಪಾವತಿಸದಿದ್ದರೆ ಖಾತೆಯನ್ನು ಅಮಾನತಿನಲ್ಲಿಡಲಾಗುವುದು. 12 ತಿಂಗಳವರೆಗೆ ಪಾವತಿಸಲು ವಿಫಲರಾದರೆ ಚಾಲ್ತಿಯಿಲ್ಲದ ಖಾತೆಯಾಗುತ್ತದೆ. ನಿರಂತರವಾಗಿ 24 ತಿಂಗಳವರೆಗೆ ಪಾವತಿಸದಿದ್ದರೆ ಖಾತೆಯನ್ನು ಮುಚ್ಚಲಾಗುತ್ತದೆ. ಹೀಗೆ ಖಾತೆಯಲ್ಲಿ ಜಮೆಯಾದ ಮೊತ್ತವನ್ನು ನೋಂದಾಯಿತ ಸದಸ್ಯರಿಗೆ ಹಿಂತಿರುಗಿಸುತ್ತಾರೆ ಅಥವಾ ಖಾತೆಯನ್ನು ದಂಡ ಪಾವತಿಸಿ ಪುನಃ ಪ್ರಾರಂಭಿಸಬಹುದು.
ಪಿಂಚಣಿ ಪ್ರಾರಂಭವಾದ ನಂತರ ನೋಂದಾಯಿತ ಸದಸ್ಯ ಮೃತಪಟ್ಟರೆ, ಅವರ ಸಂಗಾತಿಗೆ (ಪತಿ ಅಥವಾ ಪತ್ನಿ) ಅದೇ ಪಿಂಚಣಿಯನ್ನು ಸಂಗಾತಿಯ ಮರಣದವರೆಗೆ ನೀಡುತ್ತಾರೆ. ಹೀಗೆ ಪತಿ ಅಥವಾ ಪತ್ನಿ ಇಬ್ಬರೂ ಮೃತರಾದ ನಂತರ ನಾಮಿನಿಗೆ ಒಟ್ಟು ಜಮೆಯಾದ ಮೊತ್ತವನ್ನು ನೀಡುತ್ತಾರೆ. ನೋಂದಾಯಿತ ಸದಸ್ಯ 60 ವರ್ಷಕ್ಕಿಂತ ಮೊದಲು ಮೃತರಾದರೆ, ಪತ್ನಿ ಅಥವಾ ಪತಿ ಯೋಜನೆಯಿಂದ ಹೊರಬರಬಹುದು. ಹಾಗೆ ಹೊರಬಂದರೆ ಚಂದಾದಾರ ಪಾವತಿಸಿದ ಮೊತ್ತವನ್ನು ಪಡೆಯಬಹುದು ಅಥವಾ ಅದೇ ಸದಸ್ಯರ ಹೆಸರಿನಲ್ಲಿ ಪತಿ ಅಥವಾ ಪತ್ನಿ ಉಳಿದ ಅವಧಿಗೆ ಪಾವತಿಸಿ ಪಿಂಚಣಿ ಪಡೆಯಬಹುದು. ಇತರ ಖಾತೆ ಇರುವವರೂ ಎಪಿವೈ ಸದಸ್ಯರಾಗಬಹುದು. ಅಂದರೆ ಇಪಿಎಫ್, ಎನ್​ಪಿಎಸ್ ಅಥವಾ ಪಿಪಿಎಫ್ ಖಾತೆ ಹೊಂದಿದವರೂ ಸಹಿತ ಎಪಿವೈ ಯೋಜನೆಯಲ್ಲಿ ನೋಂದಾಯಿತ ಸದಸ್ಯರಾಗಬಹುದು. ನೋಂದಾಯಿತ ಸದಸ್ಯ ಹಾಗೂ ಅವರ ಸಂಗಾತಿಯ ನಿಧನದ ನಂತರ ನಾಮಿನಿಗೆ ಅಥವಾ ವಾರಸುದಾರರಿಗೆ ಒಟ್ಟುಗೂಡಿದ ಮೊತ್ತವನ್ನು ನೀಡುತ್ತಾರೆ. ಯೋಜನೆಯಲ್ಲಿ ಮುಂದುವರಿಯಲು ಇಚ್ಛೆ ಇಲ್ಲದಿದ್ದರೆ, ಯಾವುದೇ ಸಮಯದಲ್ಲಿ ನಿರ್ಗಮಿಸಬಹುದು. ಆ ಅವಧಿಯವರೆಗೆ ಪಾವತಿಸಿದ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.
ಎಲ್ಲಿ ಹೂಡಿಕೆ?
ಕೇಂದ್ರ ಸರ್ಕಾರದ ಭದ್ರತಾ ಪತ್ರಗಳಲ್ಲಿ ಶೇ.45ರಿಂದ 55ರವರೆಗೆ.
ಸರ್ಕಾರದ ಸಾಲಪತ್ರಗಳಲ್ಲಿ ಶೇ.35 ರಿಂದ 45ರವರೆಗೆ.
ಷೇರು ಆಧಾರಿತ ಹೂಡಿಕೆಗಳಲ್ಲಿ ಶೇ.5ರಿಂದ 15ರವರೆಗೆ.
ಮನಿ ಮಾರ್ಕೆಟ್ ಹೂಡಿಕೆಗಳಲ್ಲಿ ಶೇ.5ರವರೆಗೆ.
ಅಸೆಟ್ ಬ್ಯಾಕ್ಡ್ ಸೆಕ್ಯುರಿಟಿಗಳಲ್ಲಿ ಶೇ.5ರವರೆಗೆ.
ಹೂಡಿಕೆಯಾದ ಮೊತ್ತವು ನಿರೀಕ್ಷೆಗಿಂತ ಹೆಚ್ಚು ಲಾಭಾಂಶ ನೀಡಿದರೆ ಸದಸ್ಯರಿಗೆ ನಿರ್ದಿಷ್ಟ ಪಡಿಸಿದಕ್ಕಿಂತ ಹೆಚ್ಚು ಪಿಂಚಣಿ ನೀಡುತ್ತಾರೆ. ಒಂದು ವೇಳೆ ಹೂಡಿಕೆಯು ನಿರೀಕ್ಷೆಯಷ್ಟು ಗಳಿಕೆ ನೀಡದಿದ್ದರೆ ಕೇಂದ್ರ ಸರ್ಕಾರವೇ ನಷ್ಟವನ್ನು ಭರಿಸಿ, ನಿಗದಿತ ಪಿಂಚಣಿ ನೀಡುತ್ತದೆ. ಹಾಗಾಗಿಯೇ ಇದು ಕೇಂದ್ರ ಸರ್ಕಾರದ ಖಚಿತ ದರದ ಪಿಂಚಣಿ ನೀಡುವ ಯೋಜನೆಯಾಗಿದೆ.
ಇತ್ತೀಚಿನ ವರದಿಯಂತೆ, ದೇಶದಲ್ಲಿ ಒಟ್ಟು 97,60,000ಕ್ಕೂ ಹೆಚ್ಚು ಎಪಿವೈ ಸದಸ್ಯರಿದ್ದಾರೆ. ಯಾರು ಸದಸ್ಯರಾಗಿಲ್ಲವೋ ಇಂದೇ ಅಟಲ್ ಪಿಂಚಣಿ ಯೋಜನೆಯಲ್ಲಿ ನೋಂದಾಯಿತ ಸದಸ್ಯರಾಗಲು, ಖಾತೆ ಪ್ರಾರಂಭಿಸಬಹುದು. ಇದರಿಂದ ದುಡಿಮೆ ಇಲ್ಲದ ಮುಪ್ಪಿನ ದಿನಗಳಲ್ಲಿ ಖಚಿತ ಹಾಗೂ ನಿರ್ದಿಷ್ಟ ಪಿಂಚಣಿ ಪಡೆದು ನೆಮ್ಮದಿಯ ಜೀವನ ಸಾಗಿಸಬಹುದು.

ಹೊಸ ಶಿಫಾರಸುಗಳು:
ಈಗ ಪ್ರಸ್ತುತ ಪಿಂಚಣಿ ಮೊತ್ತವು 1 ರಿಂದ 5 ಸಾವಿರ ರೂಪಾಯಿವರೆಗೆ ಮಾತ್ರ ಇದೆ. ಸದ್ಯ ಈ ಯೋಜನೆಯ ಸದಸ್ಯರಾದವರು ಅವರ ನಿವೃತ್ತಿ ವಯಸ್ಸಿಗೆ ಬರುವ ವೇಳೆಗೆ ರೂ. 5 ಸಾವಿರ ಮಾಸಿಕ ಪಿಂಚಣಿಯು ಆ ದಿನಮಾನಗಳ ಖರ್ಚಿಗೆ ಸಾಕಾಗುವುದಿಲ್ಲ. ಹೀಗಾಗಿ ಪಿಂಚಣಿ ಮಿತಿಯನ್ನು ರೂ.10 ಸಾವಿರಕ್ಕೆ ಏರಿಸಬೇಕೆಂದು ಪಿಂಚಣಿ ಪ್ರಾಧಿಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಆರ್ಥಿಕ ಸೇವಾ ಇಲಾಖೆಯ ಜಂಟಿ ಕಾರ್ಯದರ್ಶಿ ಎಂ. ಕೆ. ಮಿಶ್ರಾ ಇತ್ತೀಚೆಗೆ ತಿಳಿಸಿದ್ದಾರೆ. ಹಾಗೆಯೇ, ಈ ಯೋಜನೆಗೆ ನೋಂದಾಯಿತ ಸದಸ್ಯರಾಗಲು ಈಗ 18 ರಿಂದ 40ರ ವಯೋಮಿತಿ ಇದೆ. ಇದನ್ನು 50 ವರ್ಷದವರೆಗೆ ಏರಿಸಬೇಕು ಎನ್ನುವ ಶಿಫಾರಸು ಕೂಡ ಪರಿಗಣನೆಯಲ್ಲಿದೆ.

No comments:

Post a Comment