ಆರೋಗ್ಯ ಕರ್ನಾಟಕದಲ್ಲಿ ಯಶಸ್ವಿನಿ.
ಬೆಂಗಳೂರು: ಬಡರೋಗಿಗಳ ಪಾಲಿನ ಆಶಾಕಿರಣವಾಗಿರುವ ಯಶಸ್ವಿನಿ ಯೋಜನೆ ಕೊನೆಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನವಾಗಿದೆ. ಇದರಿಂದಾಗಿ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿಯೇ ಯಶಸ್ವಿನಿ ಯೋಜನೆಯಲ್ಲಿ ಪಡೆಯುತ್ತಿದ್ದ ಎಲ್ಲ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ.
ಸರ್ಕಾರ ಆದೇಶ: ಒಂದು ದಶಕಕ್ಕೂ ಅಧಿಕ ಕಾಲದಿಂದ ಜನರಿಗೆ ಆರೋಗ್ಯ ಭದ್ರತೆ ನೀಡಿರುವ ಯಶಸ್ವಿನಿ ಯೋಜನೆಯನ್ನು ಕೈಬಿಡುವ ನಿರ್ಧಾರಕ್ಕೆ ರಾಜ್ಯವ್ಯಾಪಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಯೋಜನೆ ಮುಂದುವರಿಸುವ ಭರವಸೆ ನೀಡಿ, ಆದೇಶ ಹೊರಡಿಸಿದ್ದರು. ಇದೀಗ ಯಶಸ್ವಿನಿ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿರುವ ಕುರಿತು ಅಧಿಕೃತವಾಗಿ ಸರ್ಕಾರ ಆದೇಶ ಹೊರಡಿಸಿದೆ. ಪರಿಣಾಮ ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದೊಂದಿಗೆ 2003ರಲ್ಲಿ ಪ್ರಾರಂಭವಾದ ಯೋಜನೆ ಇದೀಗ ರಾಜ್ಯದ ಎಲ್ಲ ವರ್ಗದ ಸೇವೆಗೆ ಮುಕ್ತವಾಗಲಿದೆ.
ಒಂದೇ ಸೂರಲ್ಲಿ ಚಿಕಿತ್ಸೆ: ರಾಜ್ಯದಲ್ಲಿ ಜಾರಿಯಲ್ಲಿದ್ದ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿ ‘ಸಾರ್ವತ್ರಿಕ ಆರೋಗ್ಯ ರಕ್ಷಣೆ’ ಯೋಜನೆ ಜಾರಿಗೆ ತರಲಾಗಿದೆ. ಹೀಗಾಗಿ ಈ ಎಲ್ಲ ಯೋಜನೆಯಡಿಯಲ್ಲಿ ದೊರೆಯುವ ಆರೋಗ್ಯ ಸೇವೆಯನ್ನು ಹೆಲ್ತ್ ಕಾರ್ಡ್ ತೋರಿಸಿ ಪಡೆಯಬಹದು.
10 ರೂ.ಗೆ ಕಾರ್ಡ್!: ರೋಗಿಗಳಿಗೆ ನೋಂದಣಿ ಕೌಂಟರ್ನಲ್ಲಿ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಆಧರಿಸಿ, ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ. ಇದಕ್ಕೆ 10 ರೂ. ಪಾವತಿಸಬೇಕಾಗುತ್ತದೆ.
ಏನಿದು ಯೋಜನೆ?
ಎಲ್ಲ ನಾಗರಿಕರಿಗೂ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ಜಾರಿಗೊಳಿಸಿದೆ. ಇದು ದೇಶದಲ್ಲೇ ಮೊದಲು. ಯೋಜನೆಯಡಿ 6.5 ಕೋಟಿ ಜನರಿಗೆ 1516 ನಿರ್ದಿಷ್ಟ ಚಿಕಿತ್ಸೆ ಒದಗಿಸಲಾಗುತ್ತದೆ. ಬಿಪಿಎಲ್ ಹೊಂದಿದವರಿಗೆ ಬಹುತೇಕ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಯೋಜನೆಯ ಪ್ಯಾಕೇಜ್ ದರದ ಶೇ.30ನ್ನು ಸರ್ಕಾರ ಭರಿಸುತ್ತದೆ. ಯಾವುದೇ ಪಡಿತರ ಚೀಟಿ ಹೊಂದಿಲ್ಲದವರೂ ಈ ವರ್ಗಕ್ಕೆ ಸೇರುತ್ತಾರೆ.
ಚಿಕಿತ್ಸಾ ವೆಚ್ಚದ ವಿವರ
5 ಸದಸ್ಯರಿರುವ ಒಂದು ಕುಟುಂಬಕ್ಕೆ ನಿರ್ದಿಷ್ಟ ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ವರ್ಷಕ್ಕೆ 30 ಸಾವಿರ ರೂ.ವರೆಗೆ ವೆಚ್ಚ ಭರಿಸಲಾಗುತ್ತದೆ. ತೃತೀಯ ಹಂತದ ಆರೋಗ್ಯ ಚಿಕಿತ್ಸೆಗೆ 1.5 ಲಕ್ಷ ರೂ.ವರೆಗೆ ಒದಗಿಸಲಾಗುತ್ತದೆ. ತೃತೀಯ ಹಂತದ ತುರ್ತಚಿಕಿತ್ಸಾ ಸಂದರ್ಭದಲ್ಲಿ ಇನ್ನೂ ಹೆಚ್ಚಿನ 50 ಸಾವಿರ ರೂ. ಆರ್ಥಿಕ ನೆರವನ್ನು ನೀಡಲಾಗುತ್ತದೆ. ಬಿಪಿಎಲ್ ರೋಗಿಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರೆನ್ಸ್ ಪಡೆದು, ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ನಂತರ ಯಾವುದೇ ಪಾವತಿ ಮಾಡಬೇಕಿಲ್ಲ. ಸಾಮಾನ್ಯ ರೋಗಿಗೆ ಸಹ ಪಾವತಿ ಆಧಾರದ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಯೋಜನೆಯ ಪ್ಯಾಕೇಜ್ ದರದ ಶೇ.30 ಸರ್ಕಾರ ಪಾವತಿಸುತ್ತದೆ.
ಚಿಕಿತ್ಸೆಗೆ ಷರತ್ತು ಅನ್ವಯ
ರೋಗಿಯು ಮೊದಲು ಹೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಆರೋಗ್ಯ ಕರ್ನಾಟಕ ಯೋಜನೆ ಅಡಿ ನೋಂದಾಯಿತ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ರೆಫರೆನ್ಸ್ ಅನ್ನು ಯಾವುದೇ ಒಂದು ನಿರ್ದಿಷ್ಟ ಖಾಸಗಿ ಆಸ್ಪತ್ರೆಗೆ ನೀಡುವಂತಿಲ್ಲ. ರೋಗಿ ತನ್ನ ಇಚ್ಛಾನುಸಾರ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಸಾರ್ವಜನಿಕ ಆಸ್ಪತ್ರೆ ಪಟ್ಟಿಯನ್ನು ಎಲ್ಲ ಆರೋಗ್ಯ ಸಂಸ್ಥೆಯಲ್ಲಿ ಪ್ರದರ್ಶಿಸಲಾಗುತ್ತದೆ.
ಎಲ್ಲೆಲ್ಲಿ ಸಿಗುತ್ತೆ ಕಾರ್ಡ್?
ಪಿಎಂಎಸ್ಎಸ್ವೈ ಬೆಂಗಳೂರು, ಕೆ.ಸಿ.ಜನರಲ್ ಆಸ್ಪತ್ರೆ ಬೆಂಗಳೂರು, ಜಯದೇವ ಆಸ್ಪತ್ರೆ ಬೆಂಗಳೂರು, ಮಿಮ್್ಸ ಮಂಡ್ಯ, ಮೆಗ್ಗಾನ್ ಶಿವಮೊಗ್ಗ, ವೆನ್ಲಾಕ್ ಮಂಗಳೂರು, ಕಿಮ್್ಸ ಹುಬ್ಬಳ್ಳಿ, ವಿಮ್್ಸ ಬಳ್ಳಾರಿ, ಜಿಮ್್ಸ ಕಲಬುರಗಿ, ಎಸ್ಎನ್ಆರ್ ಆಸ್ಪತ್ರೆ ಕೋಲಾರ, ಟಿ.ನರಸೀಪುರ ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಉಳಿದಂತೆ ಇತರ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆ.31ರೊಳಗೆ ಆರಂಭವಾಗುತ್ತದೆ.
ಮಾಹಿತಿ ಶಿಬಿರ
ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಲ್ಲಿರುವ ಗೊಂದಲ ನಿವಾರಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಶಿಬಿರ ಹಮ್ಮಿಕೊಂಡಿದೆ. ಯಶಸ್ವಿನಿ ಆರೋಗ್ಯ ಕರ್ನಾಟಕದಡಿ ವಿಲೀನವಾಗಿರುವುದರಿಂದ ಸಹಕಾರಿ ಸಂಘದ ಸದಸ್ಯರಿಗೆ ಪ್ರಸಕ್ತ ವರ್ಷದಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಸಾಲ ನೀಡುವ ಸಂದರ್ಭ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಸಹಾಯಧನ ವಿತರಿಸುವ ಸಂದರ್ಭದಲ್ಲಿ ಯಶಸ್ವಿನಿ ಯೋಜನೆಯ ಸದಸ್ಯತ್ವ ವಂತಿಗೆ ಕಡಿತ ಮಾಡುವಂತಿಲ್ಲ. ಗೊಂದಲ ನಿವಾರಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ನೇಮಕ ಮಾಡಿರುವ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಆರೋಗ್ಯ ಕರ್ನಾಟಕ ನೋಂದಾಯಿತ ಆಸ್ಪತ್ರೆಗಳ ಪಟ್ಟಿ ಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment